ಅಪೊಲೊ 2
	
ಮಾನವನನ್ನು ಚಂದ್ರನ ಮೇಲೆ ಇಳಿಸಲು ಅಮೆರಿಕ ಸಿದ್ಧಪಡಿಸಿದ 'ಮಾನವ, ಚಂದ್ರನ ಮೇಲೆ (ಮ್ಯಾನ್ ಆನ್ ದಿ ಮೂನ್) ಯೋಜನೆಯಲ್ಲಿ ಪ್ರಥಮವಾಗಿ ಯಶಸ್ವಿಯಾದ ಅಂತರಿಕ್ಷನೌಕೆ. ಈ ಯೋಜನೆಯಲ್ಲಿ 1961-1968ರ ತನಕ ಅಮೆರಿಕ 21 ಮಾನವರಹಿತ ಅಂತರಿಕ್ಷನೌಕೆಗಳನ್ನು ಚಂದ್ರನೆಡೆಗೆ ಹಾರಿಸಿತು. ಇವುಗಳಲ್ಲಿ 13 ನೌಕೆಗಳು ಚಂದ್ರನ ಸುತ್ತ ತಗ್ಗುಮಟ್ಟದ ಹಾರಾಟವನ್ನು ನಡೆಸಿ, ಅದರ ಮೇಲ್ಮೈಯ ಒಂದು ಲಕ್ಷಕ್ಕೂ ಹೆಚ್ಚಿನ ಛಾಯಾ ಚಿತ್ರಗಳನ್ನು ಭೂಮಿಗೆ ರವಾನಿಸಿವೆ. 1968ರ ಉತ್ತರಭಾಗದಿಂದ 1969ರ ಮೇ ತಿಂಗಳಿನವರೆಗೆ ಮಾನವಸಹಿತವಾದ ನಾಲ್ಕು ಅಂತರಿಕ್ಷನೌಕೆಗಳನ್ನು ಅಮೆರಿಕ ಹಾರಿಸಿದೆ. ಇವೆಲ್ಲ ಸಫಲಪ್ರಯೋಗಗಳ ಫಲಿತಾಂಶ ಅಪೊಲೊ 11.		(ನೋಡಿ- ಅಂತರಿಕ್ಷ-ಸಂಶೋಧನೆ) 

	ಈ ಅಂತರಿಕ್ಷನೌಕೆಯ ಪೂರ್ಣ ಹೆಸರು ಅಪೊಲೊ 11/ಸ್ಯಾಟರ್ನ್ 5. ತಳಭಾಗ ಸ್ಯಾಟರ್ನ್ 5 ಎಂಬ ಹೆಸರಿನ ಚಾಲಕವಿಭಾಗ. ಇದು ಮೂರು ಘಟ್ಟಗಳಲ್ಲಿ ಜೋಡಣೆಗೊಂಡಿರುವ ರಾಕೆಟ್ ವ್ಯವಸ್ಥೆ. ಇದರ ಎತ್ತರ 75ಮೀ. ಭಾರ 2954.64 (ಮೆಟ್ರಿಕ್) ಟನ್ನುಗಳು. ಮೆಲುಭಾಗ ಅಪೊಲೊ 11. ಎತ್ತರ 25 ಮೀ, ಭಾರ 45.36 ಟ. ಪೂರ್ಣವ್ಯವಸ್ಥೆಯ ಎತ್ತರ 100ಮೀ. ಭಾರ 3000 ಟ.

	ಯಾಂತ್ರಿಕ ವ್ಯವಸ್ಥೆ: ಅಪೊಲೊದಲ್ಲಿ ಎಂಟು ಭಾಗಗಳಿವೆ. ತಳದ ನಾಲ್ಕು ಭಾಗಗಳು ಅಂತರಿಕ್ಷಚಲನೆಯನ್ನು ನಿಯಂತ್ರಿಸುವ ವಾಹನ ವ್ಯವಸ್ಥೆ. ಇದರಲ್ಲಿ ಒಂದು ಗಣಕಯಂತ್ರವೂ ಇದೆ. ಮೇಲಿನ ಕವಚದೊಳಗೆ ಚಂದ್ರಕೋಶವಿದೆ. (ಲೂನಾರ್ ಎಕ್ಸ್ ಕರ್ಪನ್ ಮಾಡ್ಯೂಲ್ ಅಥವಾ ಎಲ್ ಇಎಂ ಅಥವಾ ಲೆಮ್). ಜೇಡನಂತೆ ಇದರ ಆಕಾರ. ಆದ್ದರಿಂದ ಜೇಡ (ಸ್ಪೈಡರ್) ಎಂದು ಕರೆಯುವುದಿದೆ. ಲೆಮ್ ನಲ್ಲಿ ಎರಡು ಘಟ್ಟಗಳು-ಇಳಿವ ಘಟ್ಟಿ (ಡಿಸೆಂಟ್ ಸ್ಟೇಜ್) ಮತ್ತು ಏರುವ ಘಟ್ಟ (ಅಸೆಂಟ್ ಸ್ಟೇಜ್). ಇಳಿಘಟ್ಟದಲ್ಲಿ ಚಂದ್ರಸ್ಪರ್ಶಮಾಡಲು, ಆ ಆಘಾತ ಸಹಿಸಲು ಸಮರ್ಥವಾದ ನಾಲ್ಕು ಕಾಲುಗಳಿವೆ. ಒಂದು ಕಾಲಿಗೆ ಜೋಡಿಸಿರುವ ಏಣಿಯ ಮೂಲಕ ಯಾತ್ರಿಗಳು ಇಳಿಯಬಹುದು. ಚಂದ್ರನ ಮಣ್ಣನ್ನು ವಿಶ್ಲೇಷಿಸುವ, ಚಂದ್ರಕಂಪವನ್ನು ಲೇಖಿಸುವ, ಪರಿಸರದ ಟೆಲಿವಿಷóನ್ ಚಿತ್ರ ಬಿಂಬಿಸುವ ಉಪಕರಣಗಳೆಲ್ಲ ಇಳಿಘಟ್ಟಕ್ಕೇ ಜೋಡಿಸಲಾಗಿದೆ. ಅಂತರಿಕ್ಷ ಉಡುಪುಧಾರಿಗಳಾಗಿ ಚಂದ್ರನ ಮೇಲೆ ಇಳಿಯಲು ಸಿದ್ಧರಾಗಿರುವ ಇಬ್ಬರು ಯಾತ್ರಿಕರ ನೆಲೆಏರುಘಟ್ಟ. 1600 ಕಿ.ಗ್ರಾಂ. ನೂಕುಬಲವಿರುವ ರಾಕೆಟ್ ಇದಕ್ಕೆ ಜೋಡಣೆಯಾಗಿದೆ. ಲೆಮ್ ಅಪೊಲೊದ ಐದನೆಯ ಭಾಗ. ಆರನೆಯದು ಇದರ ಮೇಲಿರುವ ಸರ್ವಿಸ್ ಕೋಶ (ಸರ್ವಿಸ್ ಮಾಡ್ಯೂಲ್; ಎಸ್ ಎಂ). ಇದು ಮುಖ್ಯವಾಗಿ ಯಂತ್ರೋಪಕರಣಗಳ ಆಗಾರ. ಅಪೊಲೊ ಉಪಕರಣಗಳಿಗೆ ವಿದ್ಯುಚ್ಛಕ್ತಿ ಪೂರೈಕೆ. ನೀರಿನ ಏರ್ಪಾಡು ಎಸ್ ಎಂ ಮೂಲಕ ಆಗುವುದು. ಭೂಕಕ್ಷೆಯಿಂದ ಪಾರಾದ ಮೇಲೆ ಮರಳುವವರೆಗಿನ ಚಲನೆಯನ್ನು ನಿಯಂತ್ರಿಸಲು ಬೇಕಾದ ರಾಕೆಟ್‍ಗಳು ಇಲ್ಲಿವೆ. ಎಸ್ ಎಂ ನ ಮೇಲೆ ಇರುವ ಕಮಾಂಡ್ ಕೋಶ (ಕಮಾಂಡ್ ಮಾಡ್ಯೂಲ್, ಸಿಎಂ) ಏಳನೆಯಭಾಗ. ಆಕಾರ ಶಂಕುಮುಂಡ. 3,400 ಟನ್ ಗಳಷ್ಟು ಉಡಾವಣೆಯ ಬಲಗಳನ್ನು, ಗಂಟೆಗೆ 40,000 ಕಿ.ಮೀ.ವರೆಗಿನ ಮಹಾ ವೇಗವನ್ನು, -1010 ಸೆಂ. ಗ್ರೇಡಿನಿಂದ 27600 ಸೆಂ.ಗ್ರೇಡಿನವರೆಗಿನ ಉಷ್ಣತೆಯ ತ್ರೀವ್ರ ಏರಿಳಿತಗಳನ್ನು ಸಹಿಸಿಕೊಂಡು ಅದು ಒಳಗಿರುವ ಯಾತ್ರಿಗಳಿಗೆ ರಕ್ಷಣೆ ನೀಡಬೇಕು; ಹಗುರಾಗಿರಬೇಕು, ದೃಢವೂ ಆಗಿರಬೇಕು. ಸಿಎಂನಲ್ಲಿ ಮೂರು ಮುಖ್ಯ ವಿಭಾಗಗಳಿವೆ. ಚೂಪಾದ ಮೇಲಿನ ವಿಭಾಗದಲ್ಲಿ ಚಂದ್ರಕೋಶವನ್ನು ಪೋಣಿಸುವ ಸಾಧನವಿದೆ. ಭೂಮಿಗೆ ಮರಳುವಾಗ ಇದೇ ಭಾಗ ಮೇಲುಗಡೆ (ಅಂದರೆ ಚಲನೆಯ ವಿರುದ್ಧದಿಕ್ಕು) ಇರುವುದು. ಆಗ ಅದರಿಂದ ಪ್ಯಾರಾ ಚೂಟ್‍ಗಳು ಕಳಚಿ, ತೆರೆದು ಕೋಶದ ವೇಗವನ್ನು ತಗ್ಗಿಸುವಂತೆ ಮೊದಲೇ ಅಳವಡಿಕೆಯಾಗಿರುತ್ತದೆ. ಕೋಶದ ಮಧ್ಯವಿಭಾಗ ಮೂವರು ಯಾತ್ರಿಗಳ ನೆಲೆ. 5.9 ಘ.ಮಿ. ಪ್ರದೇಶ. ಇಲ್ಲಿ ಹವೆ, ಗಾಳಿ, ಒತ್ತಡ ನಿಯಂತ್ರಿತ. ಯಾತ್ರಿಗಳ ಚಲನವಲನ, ಉಸಿರಾಟ, ಮಾತು, ಎದೆಬಡಿತ ಎಲ್ಲವನ್ನು ಪ್ರತಿಕ್ಷಣ ಚಿತ್ರಿಸುವ, ಭೂಮಿಗೆ ಪ್ರಸರಿಸುವ ಸ್ವಯಂಚಾಲಿತ ಸೂಕ್ಷ್ಮೋಪಕರಣಗಳು ಇಲ್ಲಿವೆ. ತಳದಲ್ಲಿರುವ ಮೂರನೆಯ ವಿಭಾಗದಲ್ಲಿ ಹಲವಾರು ಯಂತ್ರೋಪಕರಣಗಳೂ ಮರುಯಾತ್ರೆಯಲ್ಲಿ ಜಲರಾಶಿಗೆ ಬಂದು ಅಪ್ಪಳಿಸಿದಾಗ ಆಘಾತ ಸಹಿಸಲು ತಕ್ಕ ಮೆತ್ತೆಗಳೂ ಇವೆ. ಸಮಗ್ರವ್ಯವಸ್ಥೆಯ ಶಿಖರದಲ್ಲಿರುವ ಗೋಪುರಾಕಾರ ಅಪೊಲೊದ ಎಂಟನೆಯ ಭಾಗ. ಹೆಸರು ಉಡಾವಣೆ ವಿಮೋಚನಾವ್ಯವಸ್ಥೆ (ಲಾಂಚ್ ಎಸ್ಕೇಪ್ ಸಿಸ್ಟಮ್); ಭೂಮಿಯಿಂದ ಉಡಾಯಿಸಿದೊಡನೆ ಏನಾದರೂ ದೋಷ ಕಂಡಲ್ಲಿ ಯಾತ್ರಿಗಳಿರುವ ಸಿಎಂ ವಿಭಾಗವನ್ನು ಉಳಿದ ಭಾಗದಿಂದ ಬೇರ್ಪಡಿಸಿ ಸುರಕ್ಷಿತವಾಗಿ ಭೂಮಿಗೆ ಇಳಿಸಬಲ್ಲ ಸಾಧನ. ದೋಷವಿಲ್ಲದಿದ್ದರೆ ಭಾರ ಕಡಿಮೆಮಾಡಿಕೊಳ್ಳಲು ವಿಮೋಚನಾ ವ್ಯವಸ್ಥೆಯನ್ನು ಅಪೊಲೊದಿಂದ ತ್ಯಜಿಸಲಾಗುತ್ತದೆ.

	ಯಾತ್ರಿಗಳು: ನೀಲ್ ಎ. ಆರ್ಮ್‍ಸ್ಟ್ರಾಂಗ್, ಮೈಕೆಲ್ ಕಾಲಿನ್ಸ್, ಎಡ್ವಿನ್ ಇ. ಆಲ್ಡ್ರಿನ್ ಇವರು ಅಪೊಲೊ ಯಾತ್ರಿಕರು. ಆರ್ಮ್‍ಸ್ಟ್ರಾಂಗ್ ನಾಯಕ, ಚಂದ್ರನ ಮೇಲೆ ಪ್ರಥಮವಾಗಿ ಕಾಲೂರಿದ ಮಾನವ.

	(ನೋಡಿ- ಆರ್ಮ್‍ಸ್ಟ್ರಾಂಗ್-ಮತ್ತು-ಅನುಯಾಯಿಗಳು)

	ಉಡಾವಣೆ: 1969 ಜುಲೈ 16ರಂದು ಸಂಜೆ 7-02 ಗಂಟೆಗೆ (ಈ ಲೇಖನದಲ್ಲಿ ಭಾರತೀಯ ಕಾಲಮಾನವನ್ನು ಬಳಸಿದೆ) ಅಮೆರಿಕದ ಫ್ಲಾರಿಡದ ಕೇಪ್ ಕೆನ್ನೆಡಿ ಉಡಾವಣಾಪೀಠದಿಂದ ಅಪೊಲೊವನ್ನು ಹಾರಿಸಲಾಯಿತು. 3400 ಟನ್ ನೂಕು ಬಲದಿಂದ ಸ್ಯಾಟರ್ನ್ 5ರ ತಳದ ರಾಕೆಟ್ 3000 ಟನ್ ಭಾರದ ಸಮಗ್ರ ವ್ಯವಸ್ಥೆಯನ್ನು ಮೇಲೆತ್ತಿತ್ತು. ಆ ರಾಕೆಟ್ ಉರಿದು ನಾಶವಾದೊಡನೆ ಎರಡನೆಯದು ಉರಿಯಲಾರಂಭಿಸಿತು. ರಾಕೆಟ್‍ಗಳು ಉರಿದಂತೆ ಒಟ್ಟು ವ್ಯವಸ್ಥೆಯ ಭಾರ ತಗ್ಗುವುದು, ವೇಗ ಏರುವುದು, ಮೇಲೆ ಹೋದದ್ದರಿಂದ ಭೂಮಿಯ ವಿರೋಧ ಬಲಗಳು ಕಡಿಮೆ ಆಗುವುವು. ಇಂಥ ಮುಪ್ಪುರಿ ಲಾಭದ ಫಲಿತಾಂಶವಾಗಿ ಅಪೊಲೊ ಮೇಲೆ ಮೇಲೆ ನೆಗೆದು 12 ಮಿನಿಟುಗಳ ಅನಂತರ ಪೂರ್ವದಿಕ್ಕಿಗೆ ತಿರುಗಿತು. ಉರಿದು ನಾಶವಾದ ಇಂಧನದ ಭಾರ ಸೆಕೆಂಡಿಗೆ ಸುಮಾರು 16 ಟನ್. ಸ್ಯಾಟರ್ನ್‍ನ ಎರಡು ಘಟ್ಟಗಳು ಉರಿದು ಹೋದುವು. ಮೂರನೆಯದು ಭಾಗಶಃ ಉರಿದು ಅಪೊಲೊವನ್ನು ಭೂಕಕ್ಷೆಯಲ್ಲಿ ಪರಿಭ್ರಮಿಸುವಂತೆ ವಿಧಿಸಿತು. ಭೂಮಿಯಿಂದ ಕಕ್ಷೆಯ ದೂರ 185 ಕಿ.ಮೀ. ಪಥವೇಗ ಗಂಟೆಗೆ 24,000 ಕಿ. ಮೀ. ಅಪೊಲೊಗೆ ಈ ಕಕ್ಷೆ ಆಕಾಶದಲ್ಲಿ ಪಾರ್ಕಿಂಗ್ (ನಿಲ್ದಾಣ) ಏರ್ಪಾಡು; ಆದ್ದರಿಂದ ಇದರ ಹೆಸರು ಕಕ್ಷಾನಿಲ್ದಾಣ (ಪಾರ್ಕಿಂಗ್ ಆರ್ಬಿಟ್). ಇಲ್ಲಿ ನಿರಾತಂಕವಾಗಿ ಭೂಪ್ರದಕ್ಷಿಣೆ ಮಾಡುವ ಯಾತ್ರಿಗಳು ತಮ್ಮ ಸಕಲಸಾಧನೋಪಕರಣಗಳನ್ನು ಕೂಲಂಕುಷವಾಗಿ ಪುನಃ ಪರಿಶೀಲಿಸಿದರು. ಅವೆಲ್ಲ ಯುಕ್ತರೀತಿಯಲ್ಲಿ ವರ್ತಿಸುತ್ತಿವೆ ಎಂದು ದೃಢವಾದ ಮೇಲೆ ಚಂದ್ರನೆಡೆಗೆ ಪಯಣಿಸಲು ಭೂಮಿಯ ನಿಯಂತ್ರಣಾಕೇಂದ್ರದಿಂದ ಅನುಮತಿ ದೊರೆಯಿತು.

	ಚಂದ್ರನೆಡೆಗೆ ಪ್ರಯಾಣ: ಸ್ಯಾಟರ್ನ್ 5ರ ಮೂರನೆಯ ಘಟ್ಟದ ರಾಕೆಟ್‍ನ ಉಳಿದ ಭಾಗವನ್ನು ಉರಿಸಿದೊಡನೆ ಅಪೊಲೊ ವೇಗ, ದಿಕ್ಕು, ಪಥ ಚಂದ್ರನೆಡೆಗೆ ತಿರುಗಿದುವು. ನಿಶ್ಚಿತ ಕ್ಷಣದಲ್ಲಿ ನಿಷ್ಕøಷ್ಟವೇಗವನ್ನು ನಿರ್ಧರಿತ ಪಥಕ್ಕೆ ನೀಡಿದರೆ ಮಾತ್ರ ಈ ಪ್ರಯತ್ನ ಸಫಲ. ಇಲ್ಲವಾದರೆ ಆಕಾಶದ ಮಹಾವೈಶಾಲ್ಯದಲ್ಲಿ ನೌಕೆ ನಾಶವಾಗಿ ಹೋಗುವುದು. ಕಕ್ಷಾನಿಲ್ದಾಣವನ್ನು ತ್ಯಜಿಸುವಾಗ ಅಪೊಲೊ ವೇಗ ಗಂಟೆಗೆ 39,260 ಕಿ.ಮೀ.; ಉಡಾವಣೆಯ ಕ್ಷಣದಿಂದ ಗತಿಸಿದ ಕಾಲ 2-44 ಗಂಟೆ.

	ಅಂತರಿಕ್ಷ ವಿನ್ಯಾಸ: ಮೂರನೆಯ ಘಟ್ಟ ಪೂರ್ಣ ಉರಿದು ಮುಗಿಯುವ ಮೊದಲೇ ಅಪೊಲೊ ಚಂದ್ರನೆಡೆಗೆ ಧಾವಿಸುತ್ತಿದ್ದಂತೆಯೇ ಯಾತ್ರಿಗಳು ಒಂದು ಕಠಿನ ಅಂತರಿಕ್ಷ ವಿನ್ಯಾಸವನ್ನು ನಿರ್ವಹಿಸಿದರು. ಯಾತ್ರಿಕರ ನೆಲೆಯಾದ ಸಿಎಂ ಮುಂದಕ್ಕೆ (ಅಂದರೆ ಚಲನೆಯ ದಿಕ್ಕಿನಲ್ಲಿ) ಇತ್ತು. ಅದರ ಚೂಪಾದ ಮೂತಿ ಮೊದಲು, ಸಿಯಂಗೆ ಅಂಟಿಕೊಂಡು ಎಸ್ ಎಂ ಮತ್ತು ಕವಚರಕ್ಷಿತ ಲೆಮ್ ಇದೇ ಕ್ರಮದಲ್ಲಿದ್ದುವು. ಯಾತ್ರಿಕರ ರಕ್ಷಣೆಯನ್ನು ಲಕ್ಷ್ಯದಲ್ಲಿಟ್ಟು, ಉಡಾವಣೆಯ ಕಾಲದಲ್ಲಿ ಈ ಏರ್ಪಾಡು ಅಗತ್ಯ. ಆದರೆ ಮುಂದಿನ ಉದ್ದೇಶಕ್ಕೆ ಇದು ಅನುಪಯುಕ್ತ. ಆದ್ದರಿಂದ ವಿನ್ಯಾಸ ಆವಶ್ಯಕತೆ. ಅಪೊಲೊ ನಾಯಕ ಕೆಲವು ಆಸ್ಫೋಟಕಗಳನ್ನು ಹೊತ್ತಿಟ್ಟಿಸಿದ. ಕೂಡಲೇ ಲೆಮ್ ಕವಚದ ನಾಲ್ಕು ಫಲಕಗಳು ತೆರೆದುವು (ಗಿರಿಗಿಟಿಯಂಥ ಆಕಾರ); ಮತ್ತು ಸಿಎಂ-ಎಸ್ ಎಂ ಜೋಡಣೆ ಈ ಕವಚದಿಂದ ಬೇರ್ಪಟ್ಟಿತು. ಆದರೂ ಅವೆರಡೂ ಒಂದೇ ವೇಗದಿಂದ ಒಂದೇ ಪಥದಲ್ಲಿ ಒಂದರ ಹಿಂದೆ ಇನ್ನೊಂದು ಚಲಿಸುತ್ತಲೇ ಇದ್ದುವು. ಈಗ ನಾಯಕ 16 ಚಿಕ್ಕ ರಾಕೆಟ್‍ಗಳನ್ನು ಉರಿಸಿದ. ಪರಿಣಾಮವಾಗಿ ಸಿಎಂ-ಎಸ್ ಎಂ ಜೋಡಣೆ ಆಕಾಶದಲ್ಲಿ ಒಂದು ಸುತ್ತು U-ಆಕಾರದಲ್ಲಿ ತಿರುಗಿ ಸಿಎಂನ ಚೂಪುಮೂತಿ ಹಿಂದೆ ಬರುತ್ತಿರುವ ಲೆಮ್ ಕವಚದೆಡೆಗೆ (ತೆರೆದ ಫಲಕಗಳ ಕಡೆಗೆ) ಮುಖಮಾಡಿತು. ಸಿಎಂನ ಮೂತಿ ಮತ್ತು ಲೆಮ್ ನ ಏರುಘಟ್ಟದ ತುದಿ ಎರಡೂ ಜಂಟಿಯಾಗುವಂತೆ ನಾಯಕ ಚಲನೆಯನ್ನು ಜಗ್ಗಿಸಿದ. ಈಗ ಎಸ್ ಎಂನ ಬುದ್ಧಿವಂತ (ಫನ್ನಲ್) ಭಾಗ ಚಲನೆಯ ದಿಕ್ಕಿನಲ್ಲಿ ಮೊದಲಿಗಿದೆ; ಅದರ ಬೆನ್ನಿಗೆ ಸಿಎಂ ಇದರ ಮೂತಿಗೆ ಜೋಡಣೆಗೊಂಡು ಲೆಮ್ ಇನ್ನು ಅವಶ್ಯವಿಲ್ಲದ ಕವಚ, ಮೂರನೆಯ ಘಟ್ಟದ ರಾಕೆಟ್‍ನ ಉಳಿದಂಶ ಎಲ್ಲವನ್ನು ಕಳಚಿ ಬಿಟ್ಟರು. ಸಿಎಂನ ಮತ್ತು ಲೆಮ್ ಜೋಡಣೆಗೊಂಡಿರುವ ಭಾಗದ ಹೆಸರು ಸುರಂಗ (ಟನ್ನಲ್). ಇಲ್ಲಿ ಒಂದು ಸಲ ಒಬ್ಬ ನುಸುಳಿ ಇನ್ನೊಂದು ಕೋಶವನ್ನು ಸೇರಬಹುದು.

	ಮುಂದಿನ ಯಾತ್ರೆಯ ಸುಮಾರು ಮೂರು ದಿವಸಗಳ ಅವಧಿಯಲ್ಲಿ ಯಾತ್ರಿಕರ ಚಟುವಟಿಕೆಗಳನ್ನು ಟೆಲಿವಿಷನ್ ಮೂಲಕ ಭೂಮಿಯ ಮೇಲಿನ ಲಕ್ಷಾಂತರ ಜನರು ನೋಡಿದರು. ಸೂರ್ಯನ ಬಿಸಿಲು ಅಪೊಲೊ ಒಂದೇ ಪಾಶ್ರ್ವಕ್ಕೆ ಬಡಿದರೆ ಉಷ್ಣದಿಂದ ಅಪಾಯವಿದೆ. ಇದರಿಂದ ರಕ್ಷಿಸಲು ನೌಕೆ ಗಂಟೆಗೆ ಎರಡು ಸಲ ಅದರ ಪ್ರಧಾನಾಕ್ಷದ ಸುತ್ತಲೂ ಆವರ್ತಿಸುವಂತೆ ವಿಧಿಸಲಾಗಿತ್ತು. ಭೂಮಿ-ನೌಕೆ ಇವುಗಳ ನಡುವೆ ನಿರಂತರ ಸಂಪರ್ಕ, ಸ್ವಯಂಚಾಲಿತ ವ್ಯವಸ್ಥೆಗಳ ನಿಷ್ಕøಷ್ಟಕ್ರಿಯೆ ಇವೆಲ್ಲವೂ ಪೂರ್ವ ನಿರ್ಧಾರಿತ ಕ್ರಮದಲ್ಲಿ ನೆರವೇರಿದುವು. ಇದರಿಂದ ಮಧ್ಯಮಾರ್ಗ ಸಂಸ್ಕರಣದ ಅವಶ್ಯವಾಗಲಿಲ್ಲ.

	ಚಂದ್ರ ಕಕ್ಷೆಯ ಪ್ರವೇಶ: ಭೂಮಿಯ ಗುರುತ್ವಾಕರ್ಷಣವಲಯದಲ್ಲಿಯೇ ಚಂದ್ರ ಇದೆ. ಆದ್ದರಿಂದ ಅಪೊಲೊ ಈ ವಲಯದಿಂದ ಪಾರಾಗಿ ಹೋಗುವಂತಿಲ್ಲ. ಭೂಕಕ್ಷೆಯಿಂದ ಗಂಟೆಗೆ 39,260 ಕಿ.ಮೀ. ವೇಗದಲ್ಲಿ ಬಿಡುಗಡೆ ಹೊಂದಿದ ಅಪೊಲೊ ವೇಗ ಕ್ರಮೇಣ ತಗ್ಗಿತು. ಭೂಮಿಯಿಂದ 1,28,000 ಕಿ.ಮಿ. ದೂರದಲ್ಲಿ ವೇಗ ಗಂಟೆಗೆ 7,600 ಕಿ.ಮೀ.; 3,20,000 ಕಿ.ಮೀ. ದೂರದಲ್ಲಿ ವೇಗ ಗಂಟೆಗೆ 3,400 ಕಿ.ಮೀ. ಈ ಗಡಿ ದಾಟಿದ ನೌಕೆ ಚಂದ್ರಗುರುತ್ವಾಕರ್ಷಣಕ್ಷೇತ್ರದ ಪ್ರಭಾವ ಅಧಿಕವಿರುವ ಪ್ರದೇಶವನ್ನು ಪ್ರವೇಶಿಸಿತು. ಪರಿಣಾಮವಾಗಿ ವೇಗ ಏರತೊಡಗಿತು. ಹೀಗೆಯೇ ಮುಂದುವರಿದರೆ ಅದು ಚಂದ್ರತಲಕ್ಕೆ ಬಡಿದು ನಾಶವಾಗುತ್ತದೆ. ವೇಗ ಗಂಟೆಗೆ 9,000 ಕಿ.ಮೀ. ಮಿತಿ ಮುಟ್ಟುವಾಗ ನೌಕೆಯನ್ನು ಚಂದ್ರಕಕ್ಷೆಗೆ ತಳ್ಳಬೇಕು. ತಡೆರಾಕೆಟ್ (ರಿಟ್ರೊ ರಾಕೆಟ್-ಅಂದರೆ ಚಲನೆಯ ದಿಕ್ಕಿನಲ್ಲಿ ಉರಿಸಿದ ರಾಕೆಟ್. ಇದು ನೌಕೆಯನ್ನು ವಿರುದ್ಧದಿಕ್ಕಿನಲ್ಲಿ ನೂಕುವುದರಿಂದ ಚಲನೆಯನ್ನು ವಿರೋಧಿಸುತ್ತದೆ) ಉರಿಸಿ, ದಿಕ್ಕು ಬದಲಾಯಿಸಿ ನೌಕೆಯನ್ನು ಚಂದ್ರಕಕ್ಷೆಯಲ್ಲಿ ದೀರ್ಘವೃತ್ತಾಕಾರ ಪಥದಲ್ಲಿ ಪ್ರವೇಶಸುವಂತೆ ವಿಧಿಸಿದರು. ಇಲ್ಲಿಯೂ ಕ್ಷಣ, ವೇಗ, ಪಥ ಇವೆಲ್ಲದರ ಸಮರ್ಪಕ ಹೊಂದಾಣಿಕೆ ಅತ್ಯಗತ್ಯ. ನೌಕೆ ಚಂದ್ರ ನಿಂದ 112 ಕಿ.ಮೀ. ಎತ್ತರದಲ್ಲಿ ಬಂದಾಗ ವೇಗವನ್ನು ಗಂಟೆಗೆ 5,800 ಕಿ.ಮೀ. ಗೆ ತಗ್ಗಿಸಿಕೊಂಡರು. ಈಗ ನೌಕೆ ಚಂದ್ರನಿಂದ 112 ಕಿ.ಮೀ. ದೂರದಲ್ಲಿ ವೃತ್ತಕಕ್ಷೆಯಲ್ಲಿ ಸುತ್ತುತ್ತದೆ.

	ಕೊಲಂಬಿಯ ಮತ್ತು ಈಗಲ್ : ಸಿಎಂ-ಎಸ್ ಎಂ ಜೋಡಣೆಯ ಹೆಸರು ಕೊಲಂಬಿಯ; ಇದಕ್ಕೆ ಅಂಟಿ ಹಿಂದೆ ಇರುವ ಲೆಮ್ ನ ಹೆಸರು ಈಗಲ್. ಕೊಲಂಬಿಯ ಈಗಲ್‍ಗಳ ಜೋಡಣೆ ಅಪೊಲೊ. ಅಪೊಲೊ ಚಂದ್ರಕಕ್ಷೆಯಲ್ಲಿದ್ದಾಗ ಇಬ್ಬರು ಯಾತ್ರಿಕರು ಸುರಂಗದ ಮೂಲಕ ಈಗಲ್ಲನ್ನು ಪ್ರವೇಶಿಸಿ ಅಲ್ಲಿರುವ ಸಕಲ ಉಪಕರಣಗಳೂ ಕಾರ್ಯಸಮರ್ಥವಾಗಿವೆ ಎಂದು ದೃಢಪಡಿಸಿಕೊಂಡರು. ಬಳಿಕ ಕೊಲಂಬಿಯಕ್ಕೆ ನುಸುಳಿ ವಿಶ್ರಾಂತಿ ಪಡೆದರು.

	ಚಂದ್ರತಲಸ್ಪರ್ಶ: ಜುಲೈ 20. ಮುಂದಿನ ಸಾಹಸ ನೆರವೇರಿಸಲು ಭೂಮಿಯ ಮೇಲಿನ ನಿಯಂತ್ರಕರು ಅನುಮತಿ ನೀಡಿದರು. ಸ್ವಯಂಚಾಲಿತ ವ್ಯವಸ್ಥೆ ಈಗಲ್ಲನ್ನು ಚಂದ್ರತಲದ ಮೇಲಿನ ನಿರ್ದಿಷ್ಟಸ್ಥಳದಲ್ಲಿ ಇಳಿಸಲು ಸಿದ್ಧವಾಗಿತ್ತು. ಮೊದಲು ಆಲ್ಡ್ ರಿನ್ ಮತ್ತೆ ಆರ್ಮ್‍ಸ್ಟ್ರಾಂಗ್ ಈಗಲ್ಲನ್ನು ಪ್ರವೇಶಿಸಿದರು. ಪುನಃ ಅದರ ಉಪಕರಣಗಳ ಪರಿಶೀಲನೆ. ಮತ್ತೆ ಅಂತರಿಕ್ಷ ಉಡುಪುಗಳ ಧಾರಣೆ. ಅಂತರಿಕ್ಷ ಉಡುಪು ಒಂದು ಪುಟ್ಟ ಭೂಮಿ-ಉಸಿರಾಟ, ಸಂಪರ್ಕ ವ್ಯವಸ್ಥೆ ಅದರೊಳಗೆ; ಉಲ್ಕೆಗಳ, ಅತಿ ನೇರಳೆ ರಶ್ಮಿಪುಂಜಗಳ ಹೊಡೆತದಿಂದ ಅವು ಯಾತ್ರಿಕರನ್ನು ರಕ್ಷಿಸಬೇಕು; ಚಂದ್ರನಲ್ಲಿ ಫಕ್ಕನೆ ತಲೆದೋರಬಹುದಾದ ಯಾವುದೇ ಅಪಾಯದಿಂದಲೂ ಯಾತ್ರಿಕರನ್ನು ಪಾರು ಮಾಡಬೇಕು; ಹೀಗಿದ್ದರೂ ಅದು ಹಗುರವಾಗಿದ್ದು, ಯಾತ್ರಿಕರ ಚಲನವಲನಗಳಿಗೆ ಸಹಾಯಕವಾಗಿರಬೇಕು. ಒಬ್ಬೊಬ್ಬ ಹೊತ್ತ ಉಡುಪಿನ ಭಾರ ಭೂಮಿಯ ಮೇಲೆ ಸುಮಾರು 84 ಕಿ.ಗ್ರಾಂ. ಆದರೆ ಚಂದ್ರನ ಮೇಲೆ ಇದು 14 ಕಿ. ಗ್ರಾಂ. ತೂಗುವುದರಿಂದ ಯಾತ್ರಿಕರಿಗೆ ಅಷ್ಟು ಸೌಕರ್ಯವಿದೆ.

	11-17 ಗಂ. ರಾತ್ರಿ. ಮಾತೃನೌಕೆಯಾದ ಕೊಲಂಬಿಯದಿಂದ ಈಗಲ್ ಬೇರ್ಪಟ್ಟಿತು. ಕೊಲಂಬಿಯ ಅದರ ಏಕಮಾತ್ರ ಸವಾರನಾದ ಕಾಲಿನ್ಸ್ ಸಮೇತ ಕಕ್ಷೆಯಲ್ಲಿ ಸುತ್ತುತ್ತಲೇ ಇತ್ತು. 1524 ಕಿ.ಮೀ. (50,000') ಎತ್ತರದಲ್ಲಿ ಈಗಲಿನ ಇಳಿಘಟ್ಟದ ಯಂತ್ರವನ್ನು ಆಸ್ಫೋಟಿಸಿದರು. ಬೀಳುವ ವೇಗ, ದಿಕ್ಕು ಈಗಲ್ಲಿನ ಸ್ವಯಂಚಾಲಿತ ವ್ಯವಸ್ಥೆಯ ಆದೇಶದ ಪ್ರಕಾರವೇ ಇದ್ದುವು.

	ಜುಲೈ 21. ನೆಲ ಹತ್ತಿರವಾದಂತೆಯೇ ಕಲ್ಲು ಬಂಡೆಗಳಿಂದ ಕೂಡಿದ ಕೂಪದೆಡೆಗೆ ಈಗಲ್ ಇಳಿಯುತ್ತಿದ್ದುದು ಆರ್ಮ್‍ಸ್ಟ್ರಾಂಗ್‍ಗೆ ಕಂಡಿತು. ಉಳಿದಿದ್ದುದು ಕೇವಲ ಕೆಲವೇ ಸೆಕೆಂಡುಗಳು. ಚಲನೆಯ ನಿಯಂತ್ರಣವನ್ನು ಸ್ವಯಂಚಾಲಿತ ವ್ಯವಸ್ಥೆಯಿಂದ ಸ್ವತಃ ತಾನೇ ತೆಗೆದುಕೊಂಡು ಆರ್ಮ್‍ಸ್ಟ್ರಾಂಗ್ ಈಗಲ್ಲನ್ನು ಸುರಕ್ಷಿತ ಸ್ಥಳದೆಡೆಗೆ ಸಾಗಿಸಿದ. 1-47 ಗಂ. ಪೂರ್ವಾಹ್ನ ಈಗಲ್ ಚಂದ್ರತಲದಮೇಲೆ ಮೆತ್ತಗೆ ಇಳಿಯಿತು.

	ಮಾನವ, ಚಂದ್ರನ ಮೇಲೆ: ಬೆಳಗಿನವರೆಗೂ ಯಾತ್ರಿಕರು ಈಗಲ್ ಒಳಗೆ ಇದ್ದರು. ವಿಶ್ರಾಂತಿ ಬೇಕು ಮತ್ತು ಹೊಸ ಪರಿಸರದ ಪೂರ್ಣ ಪರಿಚಯವಾಗಬೇಕು. ಅಪಾಯವಿಲ್ಲ ಎಂದು ದೃಢವಾದ ಮೇಲೆ ಆರ್ಮ್‍ಸ್ಟ್ರಾಂಗ್ ಈಗಲ್ ಬಾಗಿಲು ತೆರೆದು ಏಣಿಯ ಮೂಲಕ ಒಂದೊಂದೇ ಮೆಟ್ಟಲನ್ನು ಲಯಬದ್ಧವಾಗಿ ಇಳಿದ, ಎಡಗಾಲನ್ನು ಚಂದ್ರತಲದಮೇಲೆ ಊರಿದ (8-27 ಗಂ. ಪೂ; ಜುಲೈ 21, 1969). "ಇದು ಒಬ್ಬ ಮನುಷ್ಯನಿಗೆ ಬಲು ಪುಟ್ಟ ಹೆಜ್ಜೆ; ಆದರೆ ಮಾನವ ಜನಾಂಗಕ್ಕೆ ಹನುಮಂತನೆಗೆತ" ಎಂಬ ಅರ್ಥದ ಉದ್ಗಾರವೆತ್ತಿದ. ಚಂದ್ರಲೋಕದ 15 ದಿವಸಗಳ ಹಗಲಿನ ಆರಂಭ ಆಗತಾನೇ ಆಗುತ್ತಿತ್ತು. ಆರ್ಮ್‍ಸ್ಟ್ರಾಂಗ್ ಕಾಲೂರಿದ 19 ಮಿನಿಟುಗಳ ಅನಂತರ ಆಲ್ಡ್ ರಿನ್ ಬಂದು ಅವನನ್ನು ಕೂಡಿಕೊಂಡ.

	ಇಬ್ಬರೂ ಕೂಡಿ ನಿಯೋಜಿತ ಕರ್ತವ್ಯಗಳನ್ನು, ಪ್ರಯೋಗಗಳನ್ನು ನಿರ್ವಹಿಸಿದರು. ಅಮೆರಿಕ ಸಂಯುಕ್ತಸಂಸ್ಥಾನಗಳ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ಮೂವರು ಯಾತ್ರಿಕರ ಸಹಿಯಿದ್ದ ಒಂದು ಫಲಕವನ್ನು ಏಣಿಗೆ ಕಟ್ಟಿದರು. ಅದರ ಮೇಲೆ-'ಭೂಮಿಗ್ರಹದಿಂದ ಬಂದ ಮನುಷ್ಯರು ಚಂದ್ರನ ಮೇಲೆ ಇಲ್ಲಿ ಮೊದಲ ಕಾಲಿಟ್ಟರು. ಕ್ರಿ.ಶ. ಜುಲೈ 1969. ನಾವು ಮಾನವ ಜನಾಂಗದ ಕಲ್ಯಾಣಕ್ಕಾಗಿ ಬಂದೆವು ಎಂಬರ್ಥದ ಇಂಗ್ಲಿಷ್ ಒಕ್ಕಣೆ ಇದೆ.

	ಅಮೆರಿಕದ ದೇಶದ ಧ್ವಜವನ್ನು ಅಲ್ಲಿ ನೆಟ್ಟರು. ಬೇರೆ ಬೇರೆ ಸ್ಥಳಗಳಲ್ಲಿ ಒಂದು ಕಂಪನಲೇಖಕ, ಲೇಸರ್ ಪ್ರತಿಫಲಕ ಮತ್ತು ಕಣಸಂಗ್ರಾಹಕಗಳನ್ನು ಇಟ್ಟರು. ಅವರು ಚಂದ್ರನ ಮೇಲಿಟ್ಟ ಇತರ ವಸ್ತುಗಳ ವಿವರ-ರಷ್ಯ ದೇಶದ ಮೃತ ಖಗೋಳ ಯಾತ್ರಿಗಳಾದ ಯೂರಿ ಗಗಾರಿನ್ ಮತ್ತು ಕೋಮರೋವ್ ಅವರ ಪದಕಗಳು; ಅಪೊಲೊ ಯೋಜನೆಯಲ್ಲಿ ಈ ಹಿಂದೆ ಆಸ್ಫೋಟನೆಯಿಂದ ದುರ್ಮರಣಕ್ಕೆ ಈಡಾದ ಅಮೆರಿಕದ ಮೂವರು ಅಂತರಿಕ್ಷ ಯಾತ್ರಿಕರಾದ ರಿಸ್ಸೊ, ಚಾಫಿ ಮತ್ತು ವ್ಹೈಟ್ ಅವರ ಲಾಂಛನಗಳು; ಸಂಯುಕ್ತ ರಾಷ್ಟ್ರಗಳ ವರಿಷ್ಠಾಧಿಕಾರಿಗಳ ಸಂದೇಶಗಳು-ಇತ್ಯಾದಿ.

	ಆರ್ಮ್‍ಸ್ಟ್ರಾಂಗ್ ಚಂದ್ರನ ಮೇಲೆ ನಡೆಯುತ್ತಿದ್ದಾಗ ಅದರ ಮೇಲಿನ ಮಣ್ಣು ಕೈಗೆ ಅಂಟಿಕೊಳ್ಳುವಂತೆ ಪುಡಿ ಪುಡಿಯಾಗಿದೆ ಎಂದು ಅವನಿಗನಿಸಿತು. ಚಂದ್ರಲೋಕದ ಆ ಪ್ರದೇಶ ಒಂದು ಮರುಭೂಮಿಯಂತೆ ಇತ್ತು. ಸುತ್ತಲೂ ಕೆಲವು ಕಡೆಗಳಲ್ಲಿ ದೊಡ್ಡ ದೊಡ್ಡ ಬಂಡೆಗಳೂ ಲೆಕ್ಕ ಮಾಡಲು ಸಾಧ್ಯವಿಲ್ಲದಷ್ಟು ಚಿಕ್ಕ ದೊಡ್ಡ ಕೂಪಗಳೂ ಇದ್ದುವು. ಯಾತ್ರಿಗಳ ಹೃದಯಮಿಡಿತ ಮಿನಿಟಿಗೆ 90-125. ಆರ್ಮ್‍ಸ್ಟ್ರಾಂಗ್ ಒಂದು 10 ಕಿ.ಗ್ರಾಂ. (ಚಂದ್ರನಲ್ಲಿ) ಭಾರತದ ಕಲ್ಲನ್ನೆತ್ತಿದಾಗ ಮಿಡಿತ ಬಹುವಾಗಿ ಏರಿತು. ಪರೀಕ್ಷಾರ್ಥವಾಗಿ ಅಲ್ಲಿನ ಅಮೌಲ್ಯ ಮೃತ್ತಿಕಾದಿ ವಸ್ತುಗಳನ್ನು ಸಂಗ್ರಹಿಸಿದರು.

	ಮುಂದೆ ಈಗಲ್ಲನ್ನು ಪುನಃ ಪ್ರವೇಶಿಸಿದ ಇಬ್ಬರೂ ರಾತ್ರಿ 11-24 ಗಂಟೆಗೆ ಇಳಿ ಘಟ್ಟವನ್ನೇ ಉಡಾವಣಾಪೀಠವಾಗಿ ಉಪಯೋಗಿಸಿಕೊಂಡು ರಾಕೆಟ್ ಗಳನ್ನು ಉರಿಸಿ ಚಂದ್ರನ ಅಂತರಿಕ್ಷಕ್ಕೆ ನೆಗೆದರು. ರಾಕೆಟ್ ಉರಿದ ಅವಧಿ 7 ಮಿನಿಟು 19 ಸೆ. ಚಂದ್ರಕಕ್ಷೆಯಲ್ಲಿ ಪರಿಭ್ರಮಿಸುತ್ತಿದ್ದ ಕೊಲಂಬಿಯವನ್ನು ಸುಮಾರು 3 1/2 ಗಂಟೆಗಳ ವಿನ್ಯಾಸಾನಂತರ ಈಗಲ್ ಕೂಡಿಕೊಂಡಿತು. ಜುಲೈ 22ರಂದು ಪೂರ್ವಾಹ್ನ 3-02 ಗಂಟೆಗೆ ಆರ್ಮ್‍ಸ್ಟ್ರಾಂಗ್ ಮತ್ತು ಆಲ್ಡ್ ರಿನ್ನರು ತಮ್ಮ ಅಮೌಲ್ಯಸಂಗ್ರಹಸಮೇತ ಕೊಲಂಬಿಯಕ್ಕೆ (ಅಂದರೆ ಸಿಎಂ-ಎಸ್ ಎಂ ಜೋಡಣೆ) ನುಸುಳಿದರು. ಇನ್ನು ಅವಶ್ಯವಿಲ್ಲದ ಈಗಲ್‍ನ ಏರುಘಟ್ಟವನ್ನು ತ್ಯಜಿಸಲಾಯಿತು. ಅಪೊಲೊ ಈಗ ಚಂದ್ರಕಕ್ಷೆಯಲ್ಲಿದೆ. ಪೂರ್ವಾಹ್ನ 10-27 ಗಂಟೆಗೆ ಅದರ ರಾಕೆಟ್‍ಗಳನ್ನು ಉರಿಸಿದರು. ಇದರಿಂದ ಉತ್ಪತ್ತಿಯಾದ ಸುಮಾರು 11 ಟನ್ ನೂಕುಬಲ ಅಪೊಲೊವನ್ನು ಚಂದ್ರಕಕ್ಷೆಯಿಂದ ಬಿಡುಗಡೆ ಮಾಡಿ ಭೂಮಿಯೆಡೆಗೆ ನೂಕಿತು.

	ಭೂಮಿಗೆ ಮರುಪ್ರಯಾಣ: ಈ ಪ್ರಯಾಣದಲ್ಲಿ ಎಸ್ ಎಂ ಮುಂದೆಯೂ ಅದಕ್ಕೆ ಅಂಟಿ ಸಿಎಂನ ಚಪ್ಪಟೆ ತಲವೂ ಕೊನೆಗೆ ಮೂತಿಯೂ ಇವೆ. ಎಸ್ ಎಂನ ಮೈಗೆ ಅಳವಡಿಸಿರುವ ರಾಕೆಟ್ ಗಳು ಸ್ಫೋಟಿಸಿ ಗಂಟೆಗೆ 8,850 ಕಿ.ಮೀ. ವೇಗದಲ್ಲಿ ಅಪೊಲೊ ಭೂಮಿಪ್ರಭಾವಕ್ಷೇತ್ರ ಪ್ರವೇಶಮಾಡಿತು. ಮುಂದೆ ಅಪೊಲೊ ವೇಗ ಕ್ಷಣ ಕ್ಷಣ ಏರುತ್ತಿತ್ತು. ಜುಲೈ 24ರ ರಾತ್ರಿ 9-50 ಗಂಟೆ. ಭೂಮಿಯಿಂದ 122 ಕಿ.ಮೀ. ಎತ್ತರದಲ್ಲಿ ವಾಯುಮಂಡಲದ ತೆಳು ಪದರವನ್ನು ಪ್ರವೇಶಿಸುವ ವೇಳೆ. ಸುಮಾರು 64 ಕಿ.ಮೀ. ಅಗಲವಿರುವ ಒಂದು ನಿರ್ದಿಷ್ಟ ಕಿಂಡಿಯಲ್ಲಿ, ಒಂದು ನಿರ್ದಿಷ್ಟ ಪ್ರವೇಶಕೋನದಲ್ಲಿ (ಸುಮಾರು 50-70) ನುಗ್ಗಿದರೆ ಮಾತ್ರ, ವಾಯು ಮಂಡಲದೊಡನೆ ಉಂಟಾಗುವ ತಿಕ್ಕಾಟದಿಂದ ಅಪೊಲೊ ಅನಿಲವಾಗಿ ನಾಶವಾಗದೆ ನಿರ್ದಿಷ್ಟಸ್ಥಾನದಲ್ಲಿ ಬಂದಿಳಿಯುವುದು. ಸೆಕೆಂಡಿಗೆ 11 ಕಿ.ಮೀ. ವೇಗದಲ್ಲಿ ಧಾವಿಸುತ್ತಿದ್ದ ಅಪೊಲೊದ ಸ್ವಯಂಚಾಲಿತ ದಿಗ್ದರ್ಶಕವ್ಯವಸ್ಥೆ ಸಮರ್ಪಕವಾಗಿ ಕೆಲಸಮಾಡಿ ಈ ಗುರಿ ಸಾಧಿಸಿತು. ಇನ್ನು ಅವಶ್ಯವಿಲ್ಲದ ಇದುವರೆಗೆ ಬಹೂಪಯುಕ್ತವಾಗಿದ್ದ ಎಸ್ ಎಂ ನ್ನು ಈಗ ಬಿಡುಗಡೆ ಮಾಡಿದರು. ಚಪ್ಪಟೆ ಭಾಗ ಮುಂದಾಗಿ ಪ್ರವೇಶಿಸಿದ ಸಿಎಂಗೆ ಗಾಳಿಯ ಕಣಗಳಿಂದ ಸ್ವಲ್ಪಮಟ್ಟಿಗೆ ವೇಗ ನಿರೋಧವಾಯಿತು. ಪರಮಾವಧಿ ಮೈ ಗಾಳಿಗೊಡ್ಡಿದ್ದುದರಿಂದ ತಿಕ್ಕಾಟದಿಂದ ಉಂಟಾದ ಉಷ್ಣ ವಿಸರಣೆಯಿಂದ ನಷ್ಟಗೊಂಡಿತು. ಆದರೂ ಅಪೊಲೊ ಸಾಗಿದ ಪ್ರದೇಶದಲ್ಲಿದ್ದವರಿಗೆ ಕೆಂಡದ ಉಂಡೆ ಕಂಡಹಾಗಾಯಿತು. ಆಗ ಸಿಎಂನ ಹೊರಮೈ ಉಷ್ಣತೆ 27600 ಸೆಂ.ಗ್ರೇ. ಆದರೆ ಒಳಗಿದ್ದವರಿಗೆ ಅಪಾಯವಾಗದಂತೆ ಅದರ ರಚನೆ ಮಾಡಿದ್ದರು. ನೆಲದಿಂದ ಸುಮಾರು 7,300 ಮೀ. ಎತ್ತರಕ್ಕೆ ಬಂದಾಗ ಮೂತಿಯ (ಅಂದರೆ ಮೇಲು) ಭಾಗದಿಂದ ಪ್ಯಾರಾಚೂಟ್‍ಗಳು ಬಿಡಿಸಿಕೊಂಡವು. ಇದರಿಂದ ಸಿಎಂ ವೇಗ ಕುಂಠಿತವಾಯಿತು; ನಿಯೋಜಿಸಿದ ಪ್ರಕಾರ ಪೆಸಿಫಿಕ್ ಸಾಗರದ ಮೇಲೆ ಬಡಿದಪ್ಪಳಿಸಿತು. (ಜುಲೈ 22, ರಾತ್ರಿ 10-20 ಗಂಟೆ). ಅವರ ಬರವನ್ನು ಕಾಯುತ್ತಿದ್ದ ನೌಕಾಪಡೆಯ ಸಿಬ್ಬಂದಿ ಹೆಲಿಕಾಪ್ಟರ್ ಸಹಾಯದಿಂದ ಸಿಎಂನ್ನು ಮೇಲೆತ್ತಿಕೊಂಡರು.

	ಈ ಮಹಾಯಾತ್ರೆಯ ಒಟ್ಟು ಅವಧಿ 195 ಗಂಟೆ 18 ಮಿನಿಟು, ಭೂಮಿಯಿಂದ ಹಾರಿದಾಗ ಇದ್ದ ಭಾರ 3,000 ಟನ್; ಒಂದಾಗ ಸುಮಾರು 6 ಟನ್.

	ಅಂತರಿಕ್ಷ ಸಂಶೋಧನೆಯಲ್ಲಿ ಅಪೊಲೊ 11ರ ಯಶಸ್ಸು ಒಂದು ಪ್ರಮುಖ ಮೈಲ್ಲಿಗಲ್ಲು.  (ನೋಡಿ- ಚಂದ್ರ-1)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ